ಗಾಳಿನಗರ ಶಿಕಾಗೊದಲ್ಲಿ ಹವ್ಯಕ ಸಮ್ಮೇಳನದ ಸಡಗರ

Havyaka associan of Americas(HAA) ಅಮೆರಿಕದಲ್ಲಿರುವ ಹವ್ಯಕರ ಒಕ್ಕೂಟ. ಇದು 1982 ರಲ್ಲಿ ಹವ್ಯಕ ಬಳಗವನ್ನು ಸಂಘಟಿಸಲು ಆರಂಭವಾದ ಸಂಸ್ಥೆ. ಅಂದಿನಿಂದ ಇಂದಿನವರೆಗೆ,  ಪ್ರತಿ ಎರಡು ವರ್ಷಗಳಿಗೊಮ್ಮೆ ಅಮೆರಿಕದ ವಿವಿಧ ನಗರಗಳಲ್ಲಿ ಸಮ್ಮೇಳನಗಳನ್ನು ನಡೆಸಿಕೊಂಡುಬಂದಿದೆ. ಅದರಂತೆ, ಈ ವರ್ಷದ ಸಮ್ಮೇಳನವು ಜುಲೈ ೧, ೨ ರಂದು, ಇಲಿನಾಯ್ ರಾಜ್ಯದ ‘ಗ್ರೇಸ್‍ಲೇಕ್’ ನಗರದಲ್ಲಿರುವ, ಚಿನ್ಮಯ ಮಿಷನ್‍ಗೆ ಸೇರಿದ ‘ಯಮುನೋತ್ರಿ’ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

ಹವ್ಯಕ ಸಮ್ಮೇಳನದ ವಿಶೇಷವೆಂದರೆ ಅದು ಪ್ರಾರಂಭವಾಗುವುದು ವನವಿಹಾರದೊಂದಿಗೆ. ಅದರಂತೆ, ಈ ಬಾರಿಯೂ.ಜುಲೈ ೧ ರ ಶನಿವಾರ ಲಿಬರ್ಟಿವಿಲ್‍ನ ಇಂಡಿಪೆಂಡೆನ್ಸ್ ಗ್ರೊವ್‍ನಲ್ಲಿ ಹವ್ಯಕ ಬಳಗವು ವನವಿಹಾರದಲ್ಲಿ ವಿವಿಧ ಆಟೋಟಗಳಲ್ಲಿ ಭಾಗವಹಿಸಿತ್ತು.  ಅದೇ ಸಂಜೆ ನಾಲ್ಕು ಗಂಟೆಗೆ ಸಮ್ಮೇಳನ ಪ್ರಾರಂಭವಾಯಿತು.

ಮೊದಲಿಗೆ ಲಘು ಉಪಹಾರದ ವೇಳೆಯಲ್ಲಿ, ಚಹ-ಕಾಫಿಗಳೊಂದಿಗೆ  ಪರ ಊರುಗಳಿಂದ ಬಂದಿದ್ದ ಸ್ನೇಹಿತರು, ಬಂಧುಗಳು ಉಭಯ ಕುಶಲೋಪರಿ ನಡೆಸಲು ಅವಕಾಶ ಒದಗಿಸಲಾಗಿತ್ತು. ಎಲ್ಲೆಡೆಯೂ ಕೇಳುತ್ತಿದ್ದ ಹವಿಗನ್ನಡದ ಸೊಗಡು ವಾತಾವರಣದ ಸಂಭ್ರಮವನ್ನು ಇಮ್ಮಡಿಸಿತ್ತು. ಒಂದೇ ಸಮುದಾಯಕ್ಕೆ ಸೇರಿದ ತಾವೆಲ್ಲ ಒಂದೇ ಮನೆಯವರೆಂಬ ಆತ್ಮೀಯತೆ ಅವರ ಸಂಭಾಷಣೆಗಳಲ್ಲಿ ವ್ಯಕ್ತವಾಗುತ್ತಿತ್ತು.  ನಂತರ ಅಧ್ಯಕ್ಷ ಅನಿಲ್ ಅಡ್ಕೋಳಿಯವರ ನೇತೃತ್ವದಲ್ಲಿ ಮುದ್ದಾದ ಪುಟ್ಟ ಗಣೇಶನ ಮೂರ್ತಿಯನ್ನು ತಾಳ, ಜಾಗಟೆಗಳೊಂದಿಗೆ ಮೆರವಣಿಗೆಯೊಂದಿಗೆ ಸಭಾಂಗಣಕ್ಕೆ ಕರೆತರಲಾಯಿತು. ಮಕ್ಕಳು ಭಾರತ ಮತ್ತು ಅಮೆರಿಕ ರಾಷ್ಟ್ರಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಕಾರ್ಯಕ್ರಮಗಳು ಆರಂಭಗೊಂಡವು. ನಂತರ ಸುಂದರವಾಗಿ ಅಲಂಕರಿಸಿಕೊಂಡ ಮಹಿಳೆಯರು ದೇವತಾ ಪ್ರಾರ್ಥನೆಯನ್ನು ವೃಂದಗಾನದಲ್ಲಿ ಹಾಡಿದರು.

ಹವ್ಯಕ ಒಕ್ಕೂಟದ ಅಧ್ಯಕ್ಷರಾದ ಅನಿಲ್ ಮತ್ತು ಸುಜಾತ ಅಡ್ಕೋಳಿ, ಹವ್ಯಕ ಸಮಿತಿಯ ಮುಖ್ಯಸ್ಥರಾದ ಶಂಕರ್ ಹೆಗ್ಡೆ, ರಾಜಾಶಂಕರ್ ಕಣಗಲಘಟ್ಟ, ಈಶ್ವರ ವಾರಣಾಸಿ, ಮುರಳಿಧರ್ ಕಜೆ, ಬಾಲ ಪಳಮಡೈ, ಕೃಷ್ಣಮೂರ್ತಿ ಗುಡ್ಡೆಹಿತ್ತಲು, ಸಚಿನ್ ಅವರು ಸಪತ್ನೀಕರಾಗಿ ಜ್ಯೋತಿ ಬೆಳಗುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು. 

ಈ ಸಮ್ಮೇಳನದ ಸವಿನೆನಪಿಗಾಗಿ ‘ಹವ್ಯಸಿರಿ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಅಧ್ಯಕ್ಷ ಭಾಷಣ ಮಾಡಿದ ಶ್ರೀ ಅನಿಲ್ ಅಡ್ಕೋಳಿಯವರು, ಮೊದಲಿಗೆ ಕೆಲವೇ ಸಂಖ್ಯೆಯಿದ್ದ ಹವ್ಯಕ ಸಂಘಗಳು ಈಗ ಹದಿನೇಳಕ್ಕೆ ಏರಿರುವ ಬಗ್ಗೆ ಸಂತಸ ಹಂಚಿಕೊಂಡು, ಅಮೆರಿಕದಲ್ಲಿ ಹವ್ಯಕ ಸಮುದಾಯ ಮತ್ತಷ್ಟು ಸಂಘಟಿತರಾಗಲೆಂದು ಆಶಿಸಿದರು.  ಹಿಂದಿನ ಸಮ್ಮೇಳನಗಳಲ್ಲಿನ ಆಧ್ಯಕ್ಷರ ಭಾಷಣದ ತುಣುಕುಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

ಹವ್ಯಕ ಸಮುದಾಯದ ಸಾಧಕರನ್ನು ಗುರುತಿಸುವ ಕಾರ್ಯಕ್ರಮದಡಿಯಲ್ಲಿ, ಮನು ಹೆಗಡೆಯವರು ವಿಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನು ಪರಿಚಯಿಸಲಾಯಿತು. ಅಮೆರಿಕದ ಹವ್ಯಕ ಒಕ್ಕೂಟವು, ಹವ್ಯಕ ವಿದ್ಯಾರ್ಥಿಗಳಿಗೆ ಕೊಡಮಾಡುತ್ತಿರುವ ವಿದ್ಯಾರ್ಥಿ ವೇತನ, ಭಾರತದಲ್ಲಿರುವ ಹವ್ಯಕ ರೈತರಿಗೆ ಒದಗಿಸುತ್ತಿರುವ ಕೃಷಿ ತಂತ್ರಜ್ಞಾನದ ನೆರವು ಇತ್ಯಾದಿ ಉಪಯುಕ್ತ ಕಾರ್ಯಗಳನ್ನು, ಅನಿಲ್ ಅವರು ತಮ್ಮ ಭಾಷಣದಲ್ಲಿ ಸಭೆಗೆ ತಿಳಿಸಿದರು.

ಚಿತ್ರಮಂಜರಿ

ಈ ಸಮ್ಮೇಳನದ ಮನರಂಜನೆಯ ಕಾರ್ಯಕ್ರಮಗಳ ಪಟ್ಟಿಯಲ್ಲಿ ಒಂದಕ್ಕಿಂದ ಒಂದು ಉತ್ತಮ ಕಾರ್ಯಕ್ರಮಗಳಿದ್ದವು. ಭಾರತದಿಂದ ಆಗಮಿಸಿದ್ದ ನಾಗಚಂದ್ರಿಕ ಭಟ್ ಅವರು ‘ಚಿತ್ರಮಂಜರಿ’ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕನ್ನಡ, ಹಿಂದಿ ಚಿತ್ರಗೀತೆಗಳ ಮೂಲಕ ಜನಮನ ಸೂರೆಗೊಂಡರು. ಹಾಡುಗಳ ನಡುವೆ ಡುಂಡಿರಾಜ್ ಅವರ ಹನಿಗವನಗಳನ್ನು, ಕೆಲವು ನಗೆಹನಿಗಳನ್ನು ಹೇಳುವ ಮೂಲಕ ಸಭೆಯನ್ನು ನಗೆಗಡಲಿನಲ್ಲಿ ತೇಲಿಸಿದರು. ನಾಗಚಂದ್ರಿಕಾ ಅವರ ಹಾಡಿನ ತಾಳಕ್ಕೆ ಸಭಾಂಗಣದಲ್ಲಿದ್ದ ಉತ್ಸಾಹಿ ಜನರು ಸಂತೋಷದಿಂದ ಹೆಜ್ಜೆ ಹಾಕಿ ನಲಿದರು.

ಈ ಕಾರ್ಯಕ್ರಮದ ನಂತರ ಸಭಾಂಗಣದ ಕೆಳಗಿದ್ದ ನೆಲಮಾಳಿಗೆಯಲ್ಲಿ ರಸಭೋಜನ ಎಲ್ಲರಿಗಾಗಿ ಕಾಯುತ್ತಿತ್ತು. ರುಚಿಕವಾಗಿದ್ದ ತಿನಿಸುಗಳನ್ನು ಸರದಿ ಸಾಲಿನಲ್ಲಿ ಶಿಸ್ತಾಗಿ ಪಡೆದುಕೊಂಡು, ಸ್ನೇಹಿತರೊಂದಿಗೆ ಹರಟುತ್ತಾ, ಸಿಹಿ ಜಿಲೇಬಿಯೊಂದಿಗಿನ ಸವಿ ಭೋಜನವಿತ್ತು. ಭೂರಿಭೋಜನದ ನಂತರ ಹವ್ಯಕ ಮನೆಗಳ ವಿಶೇಷವಾದ ಎಲೆ-ಅಡಿಕೆಗಳ ‘ಕವಳ’ ವೂ ಇತ್ತು. ಭೋಜನ  ಮುಗಿಸಿ ಮೇಲೆ ಬಂದರೆ, ಸಭಿಕರಿಗೆ ಯಕ್ಷಗಾನದ ಸೊಬಗನ್ನು ಉಣಬಡಿಸಲು ತಯಾರಾಗಿ ಕಾಯುತ್ತಿದ್ದರು, ಟೊರಾಂಟೊದಿಂದ ಆಗಮಿಸಿದ್ದ ‘ಯಕ್ಷಮಿತ್ರ’ ತಂಡದ ಕಲಾವಿದರು!

ಯಕ್ಷಗಾನ

‘ಯಕ್ಷಮಿತ್ರ’ ತಂಡವು,  ಅಂದು ನಡೆಸಿಕೊಟ್ಟಿದ್ದು ಮಹಾಭಾರತದ ‘ಸುಭದ್ರಾ ಕಲ್ಯಾಣ’ ಪ್ರಸಂಗ! ಉತ್ತಮ ಭಾಗವತಿಕೆ,  ಒಪ್ಪುವ ವೇಷಭೂಷಣಗಳಿಂದ ಕೂಡಿದ್ದ ಯಕ್ಷಗಾನ ಅದ್ಭುತವಾಗಿತ್ತು. ಸಾಕಷ್ಟು ಸಮಯವಾಗಿದ್ದರೂ ಸದಸ್ಯರೆಲ್ಲರೂ ಯಕ್ಷಗಾನದ ಸಂಭಾಷಣೆಗಳಿಗೆ ನಗುತ್ತಾ, ಸ್ಪಂದಿಸುತ್ತಾ ಆನಂದಿಸಿದರು. ಟೊರಾಂಟೊದಿಂದ ಆಗಮಿಸಿದ್ದ ‘ಯಕ್ಷಮಿತ್ರ’ ತಂಡವು ಕರ್ನಾಟಕದಲ್ಲಿರುವ ಯಾವುದೇ ಪ್ರಸಿದ್ಧ ಮೇಳಗಳಿಗೆ ಕಡಿಮೆ ಇಲ್ಲದ ಪೂರ್ಣ ತಂಡ. ಈ ತಂಡದಲ್ಲಿರುವವರೆಲ್ಲ ‘ಯಕ್ಷಗಾನ ’ಕಲೆಯ ಬಗ್ಗೆ ಅಪಾರ ಪ್ರೀತಿ ಉಳ್ಳವರು. ತಂತಮ್ಮ ವೃತ್ತಿಗಳೊಂದಿಗೆ ಯಕ್ಷಗಾನವನ್ನು ಪ್ರವೃತ್ತಿಯಾಗಿಸಿಕೊಂಡು, ಈ ಗಂಧರ್ವ ಕಲೆಯನ್ನು ಉಳಿಸಿ ಬೆಳೆಸಬೇಕೆಂಬ ಕಳಕಳಿ ಹೊತ್ತವರು.

ಟೊರಾಂಟೊದಿಂದ ಬಂದಿದ್ದ ‘ಯಕ್ಷಮಿತ್ರ’ ಕಲಾವಿದರೊಂದಿಗೆ, ಶಿಕಾಗೊದವರೇ ಆದ ಆದಿತ್ಯ ಸೀತಾರಾಂ ವನಪಾಲಕನಾಗಿ ಉತ್ತಮವಾಗಿ ಅಭಿನಯಿಸಿದರು. ಭಾಗವತಿಕೆ ಮಾಡಿದ ವಿನಾಯಕ ಹೆಗಡೆ, ರಾಘವೇಂದ್ರ ಕಟ್ಟಿನಕೆರೆ ಎಲ್ಲರೂ ತಾವೆಂಥಾ ಅದ್ಭುತ ಪ್ರತಿಭೆಗಳೆಂದು ಸಾಬೀತು ಪಡಿಸಿದರು. ಕೃಷ್ಣನಾಗಿ ನವೀನ್ ಹೆಗಡೆ ಮಿಂಚಿದರು. ಸತ್ಯಭಾಮೆ-ನಾಗಭೂಷಣ ಮಧ್ಯಸ್ಥ, ಬಲರಾಮ-ಶ್ರೀಕಾಂತ್ ಹೆಗಡೆ, ನಾರದ-ಕೃಷ್ಣಪ್ರಸಾದ್ ಬಾಳಿಕೆ, ಕೌರವ-ಶ್ರೀಹರ್ಷ ಹೆಗಡೆ ಎಲ್ಲ ವೇಷಧಾರಿಗಳು ಉತ್ತಮ ಆಟ ನೆಡೆಸಿಕೊಟ್ಟರು, ಡಾ.ಪರಮೇಶ್ವರ ಭಟ್ ನಿರೂಪಿಸಿದರು. ‘ಸುಭದ್ರಾ ಕಲ್ಯಾಣ’ದಲ್ಲಿ ರಾಘವೇಂದ್ರ ಕಾಂಚನ ಮದ್ದಳೆಯಲ್ಲಿ, ಅನಂತಕೃಷ್ಣ ಕಂಬಳಿಮೂಲೆ ಸಹಚಾರಕ, ಅನನ್ಯ ಬಾಳಿಕೆ ಸುಭದ್ರೆಯಾಗಿ ಚಂದಗಾಣಿಸಿದರು. ಸುಮಾರು ಎರಡು ಗಂಟೆ ಅವಧಿಯ ಯಕ್ಷಗಾನ ಅಮೋಘವಾಗಿತ್ತು.  ಯಕ್ಷಗಾನ ಮುಗಿದಾಗ ಮಧ್ಯರಾತ್ರಿ ದಾಟಿತ್ತು.

ಸಮ್ಮೇಳನದ ಎರಡನೆಯ ದಿನ!

ಜುಲೈ ೨ ರ ಭಾನುವಾರ, ಎರಡನೆಯ ದಿನದ ಸಮ್ಮೇಳನವು ಗಣಪತಿಯ ಷೋಡಷೋಪಚಾರ ಪೂಜೆಯೊಂದಿಗೆ ಪ್ರಾರಂಭವಾಯಿತು. ಇದನ್ನು, ಬ್ಲೂಮಿಂಗ್‍ಡೇಲ್ ‘ರಾಧೇ-ಶ್ಯಾಮ್’ ಮಂದಿರದ ಅರ್ಚಕರಾದ ಗೋಪಾಲಕೃಷ್ಣ ಭಟ್ಟರು ನಡೆಸಿಕೊಟ್ಟರು. ಬೆಳಗಿನ ೯.೩೦ಗೆ ಮಹಾಮಂಗಳಾರತಿಯಾಯಿತು. ಗಣಪತಿಯ ಮುಖವಾಡ ತೊಟ್ಟಿದ್ದ ಪುಟ್ಟ ಮಕ್ಕಳ ನೃತ್ಯ ಕಾರ್ಯಕ್ರಮದಿಂದ ಸಮ್ಮೇಳನದ ಇತರ ಕಲಾಪಗಳು ಪ್ರಾರಂಭವಾದವು.

ಸುಮಾ ರಾಜಾಶಂಕರ್ ಅವರು ಆಯೋಜಿಸಿದ ‘ವಿಜ್ಞಾನ ಮೇಳ’ವನ್ನು ಉದ್ಘಾಟಿಸಲಾಯಿತು. ಇದನ್ನು ಮಕ್ಕಳಿಗೆ ವಿಜ್ಞಾನದ ಬಗ್ಗೆ ತಿಳುವಳಿಕೆ, ಆಸಕ್ತಿ ಮೂಡಿಸಬಲ್ಲಂತೆ ಆಯೋಜಿಸಲಾಗಿತ್ತು. ಮಕ್ಕಳೇ ಮಾಡಬಲ್ಲಂತಹ ಪುಟ್ಟ ಪ್ರಯೋಗಗಳೂ ಇದ್ದವು. ನಿರ್ಮಲಾ ಮೋಹನ್ ಅವರ ‘ಮಂಡಲ ಕಲೆ’ಯ ಜೊತೆಗೆ ಲೀಲಾ ಹೆಗಡೆಯವರು ತಯಾರಿಸಿದ್ದ ಚಾಮುಂಡೇಶ್ವರಿ, ರಾಜ-ರಾಣಿಯರ ಗೊಂಬೆಗಳನ್ನು ಪ್ರದರ್ಶನಕ್ಕಿರಿಸಲಾಗಿತ್ತು. ಹವ್ಯಕ ಮನೆಗಳಲ್ಲಿ ಈ ಹಿಂದೆ ಬಳಕೆಯಲ್ಲಿದ್ದು, ಈಗ ಕಣ್ಮರೆಯಾಗಿರುವ ಕೆಲವು ಅಪರೂಪದ ಪಾತ್ರೆ,ಪರಿಕರಗಳೂ ಕೂಡ ಪ್ರದರ್ಶನಕ್ಕಿದ್ದು,  ನೋಡುಗರನ್ನು ತಮ್ಮತ್ತ ಆಕರ್ಷಿಸುತ್ತಿದ್ದವು.

ಅಮೆರಿಕದ ವಿವಿಧ ಪ್ರದೇಶಗಳಿಂದ ಬಂದಿದ್ದ ಹವ್ಯಕ ಸದಸ್ಯರು ನೃತ್ಯ, ಗಾಯನ, ವಾದ್ಯ ಸಂಗೀತಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಡೆಟ್ರಾಯಿಟ್‍ನಿಂದ ಬಂದಿದ್ದ ಮಕ್ಕಳ ಸ್ಪಷ್ಟ ಉಚ್ಛಾರದ ಭಗವದ್ಗಿತಾ ವಾಚನಕ್ಕೆ ಇಡೀ ಸಭಾಂಗಣ ಅಮೋಘ ಕರತಾಡನದೊಂದಿಗೆ ಮೆಚ್ಚುಗೆ ಸೂಚಿಸಿತು. ಕೊಡವ ನೃತ್ಯ, ಭಾವಗೀತೆ, ಚಿತ್ರಗೀತೆ, ಮಿಮಿಕ್ರಿ, ಹಾಸ್ಯ ಭಾಷಣ ಇತ್ಯಾದಿ ಕಾರ್ಯಕ್ರಮದೊಂದಿಗೆ ಇಡೀ ದಿನ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಲೀಲಾ ಹೆಗಡೆಯವರು ಪುಟ್ಟ ಮಕ್ಕಳಿಗಾಗಿ ರಚಿಸಿ, ನಿರ್ದೇಶಿಸಿದ  Undercover Boss  ಕಿರುನಾಟಕ ಪ್ರಸ್ತುತಿಯನ್ನು ಮಕ್ಕಳು ಬಹಳ ಉತ್ತಮ ರೀತಿಯಲ್ಲಿ ನಿರ್ವಹಿಸಿದರು.  ಈ ಸರಳ ನಾಟಕ ಮಕ್ಕಳ ಮನಸ್ಸಿನಲ್ಲಿ ಧರ್ಮ-ದೇವರುಗಳ ಬಗೆಗೆ ಸಹಜವಾಗಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸುವಂತಿತ್ತು. ಇಂತಹ ನಾಟಕಗಳ ಮೂಲಕ ನಮ್ಮ ಸಂಸ್ಕೃತಿಯ ಬಗೆಗೆ ಮಕ್ಕಳಿಗೆ ತಿಳಿವಳಿಕೆ ಮೂಡಿಸುವುದು ಸುಲಭವಿರುವುದರಿಂದ ಇಂತಹ ಪ್ರಯತ್ನಗಳು ಮತ್ತಷ್ಟು ಹೆಚ್ಚಾಬೇಕೆಂಬ ಅಭಿಪ್ರಾಯ ಕೇಳಿಬಂದಿತು.

ಹೋಳಿಗೆ, ಅಪ್ಪೆ ಹುಳಿ ಸಹಿತ ರಸದೂಟ

ಮಧ್ಯಾಹ್ನದ ಭೋಜನಕ್ಕೆ ರುಚಿಕರ ಒಬ್ಬಟ್ಟುಗಳು ಜೊತೆಯಾಗಿದ್ದವು. ಬೆಂಗಳೂರಿನಿಂದ ಸಮ್ಮೇಳನಕ್ಕೆಂದು ಒಬ್ಬಟ್ಟುಗಳನ್ನು ತರಿಸಲಾಗಿತ್ತು. ಅಧ್ಯಕ್ಷ ದಂಪತಿಗಳಾದ ಅನಿಲ್ ಮತ್ತು ಸುಜಾತ, ಸುಮಾ ರಾಜಾಶಂಕರ್ ಅವರೊಂದಿಗೆ ಹೋಳಿಗೆ-ತುಪ್ಪವನ್ನು ಬಡಿಸುತ್ತಾ ಅತಿಥಿಗಳನ್ನು ಉಪಚರಿಸುತ್ತಿದ್ದರು . ಹವ್ಯಕ ಪಾಕ ವಿಶೇಷವಾದ ‘ಅಪ್ಪೆ ಹುಳಿ’ಕೂಡ ಇದ್ದಿದ್ದು ಭೋಜನದ ರುಚಿಯನ್ನು ಇಮ್ಮಡಿಸಿತ್ತು. ಉಪ್ಪು, ಹುಳಿ, ಕಾರ ಹದವಾಗಿ ಬೆರೆತು ನಾಲಿಗೆ ಚಪ್ಪರಿಸುವಂತಿದ್ದ ‘ಅಪ್ಪೆ ಹುಳಿ’ ಎಷ್ಟು ಜನಪ್ರಿಯವಾಗಿತ್ತೆಂದರೆ,  ದೊಡ್ಡ ಡಬರಿಯ ತುಂಬಾ ಇದ್ದ ಅಪ್ಪೆ ಹುಳಿ ನೋಡನೋಡುತ್ತಿದ್ದಂತೆಯೇ ಖಾಲಿಯಾಗಿಹೋಗಿತ್ತು!

ಯುವ ವಾದ್ಯ ಮೇಳ :-  ಕನ್ನಡ, ಹಿಂದಿ ಗೀತೆಗಳ ಸ್ವರಮೇಳ(ಸಿಂಪೊನಿ)- ಈ ಸಮ್ಮೇಳನಕ್ಕಾಗಿ ವಿಶೇಷವಾಗಿ ಆಯೋಜಿಸಿದ್ದ ಕಾರ್ಯಕ್ರಮವಾಗಿತ್ತು.  ಕೆನಡಾದ ವಿನಾಯಕ ಹೆಗಡೆಯವರ ನಿರ್ದೇಶನದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಯುವ ಪ್ರತಿಭೆಗಳು ಗಾಯನ ಮತ್ತು ವಿವಿಧ ವಾದ್ಯಗಳಲ್ಲಿ ತಮಗಿರುವ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮಕ್ಕಾಗಿ, ಕೆಲವು ತಿಂಗಳುಗಳಿಂದ ಶ್ರಮವಹಿಸಿ, ಸ್ಕೈಪ್ ಮೂಲಕ ಮಕ್ಕಳಿಗೆ ತರಬೇತಿ ನೀಡಿ, ಅತ್ಯುತ್ತಮ ಪ್ರಸ್ತುತಿ ಮೂಡಿಬರಲು ಕಾರಣರಾದ ವಿನಾಯಕ ಭಟ್ಟರಿಗೆ ಸಭಾಂಗಣ ತುಂಬು ಹೃದಯದ ಮೆಚ್ಚುಗೆ, ಅಭಿನಂದನೆಗಳನ್ನು ಚಪ್ಪಾಳೆಗಳ ಮೂಲಕ ವ್ಯಕ್ತಪಡಿಸಿತು.

ಹವ್ಯಕ ಹಿರಿಯರ ಸಮಾವೇಶ, ಹವ್ಯಕ ಹರಟೆ, ಹವ್ಯಕ ಕುಟುಂಬ ದರ್ಶನ- ನೃತ್ಯ ರೂಪಕ  ಎಂಬ ಮತ್ತಷ್ಟು ಕಾರ್ಯಕ್ರಮಗಳು ಹವ್ಯಕ ಸಮುದಾಯದ ಕಲೆ-ಸಂಸ್ಕೃತಿಯನ್ನು ಪರಿಚಯಿಸಿದವು. ಬ್ರಹ್ಮಣಸ್ಪತಿ ಶಾಸ್ತ್ರಿ ಮತ್ತು ಸುರೇಶ್ ಅವರು ನಡೆಸಿಕೊಟ್ಟ ‘ಹವ್ಯಕ ಹರಟೆ’ ಹಾಸ್ಯಮಯವಾಗಿದ್ದು ಹವಿಗನ್ನಡದ ಸವಿಯನ್ನು ಪಸರಿಸಿತು. ಕಿರಣ್ ಅಡ್ಕೋಳಿಯವರ ನಗೆತುಣುಕುಗಳು ನಗೆಯ ಹೊನಲನ್ನೇ ಹರಿಸಿತು. ಸಮ್ಮೇಳನದ ಕಾರ್ಯಕ್ರಮಗಳ ನಿರೂಪಣೆಯ ಹೊಣೆಯನ್ನು ಶಿಶಿರ್ ಹೆಗಡೆ, ಅಪರ್ಣ ಅಡ್ಕೋಳಿ, ಮುರಳಿಧರ ಕಜೆಯವರು ಅತ್ಯುತ್ತಮವಾಗಿ ನಿರ್ವಹಿಸಿದರು.

ರಸಸಂಜೆ

ಎರಡನೆಯ ದಿನದ ಸಮ್ಮೇಳನದಲ್ಲಿ ಎಲ್ಲರೂ ನಿರೀಕ್ಷಿಸುತ್ತಿದ್ದ ಕಾರ್ಯಕ್ರಮ ವಿಶೇಷ ಆಹ್ವಾನಿತ ಕಲಾವಿದೆ, ಭಾರತದಿಂದ ಆಗಮಿಸಿದ್ದ ಎಂ. ಡಿ ಪಲ್ಲವಿ ಮತ್ತು ತಂಡದವರಿಂದ ಸುಗಮ ಸಂಗೀತ. ಅರುಣ್ ಕುಮಾರ್, ಕೃಷ್ಣಪ್ರಸಾದ್, ರೋಹನ್ ಪ್ರಭುಪಾದ ಅವರು ಪಲ್ಲವಿಯವರ ಗಾಯನಕ್ಕೆ ವಾದ್ಯ ಸಹಕಾರ ನೀಡಿದರು. ಕನ್ನಡಿಗರ ಮನೆಮಾತಾಗಿರುವ ದೀಪವು ನಿನ್ನದೆ, ಗಾಳಿಯು ನಿನ್ನದೆ, ಅಮ್ಮಾ, ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ, ನೀನಿಲ್ಲದೆ ನನಗೇನಿದೆ?… ಮುಂತಾದ ಗೀತೆಗಳನ್ನು ಹಾಡುವ ಮೂಲಕ ಪಲ್ಲವಿಯವರು ಸಭೆಯನ್ನು ಕನ್ನಡಮಯವಾಗಿಸಿದರು.

ಹವ್ಯಕ ಒಕ್ಕೂಟ ಸಮ್ಮೇಳನ ನಡೆಸುವುದು ಮಾತ್ರವಲ್ಲದೆ, ಪ್ರತಿಭಾವಂತ ಹವ್ಯಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ  ವೇತನ ನೀಡುತ್ತಿರುವುದು,  ಕೃಷಿಯನ್ನೇ ನೆಚ್ಚಿಕೊಂಡಿರುವ ಹವ್ಯಕ ರೈತರಿಗೆ, ಹೊಸ ರೀತಿಯ ಕೃಷಿ ವಿಧಾನ, ಆಧುನಿಕ ತಂತ್ರಜ್ಞಾನದ ತಿಳುವಳಿಕೆ ಮಾಡಿಕೊಡುತ್ತಿರುವುದು ಶ್ಲಾಘನೀಯ ಕಾರ್ಯವೇ ಸರಿ. ಇಂತಹ ಸಮಾಜಮುಖೀ ಉದ್ದೇಶಗಳು ನಿಸ್ಸಂಶಯವಾಗಿ ಯಾವುದೇ ಸಂಘಟನೆಯ ಶೋಭೆಯನ್ನು ಹೆಚ್ಚಿಸುತ್ತವೆ.

ಸುಮಾರು ನಾನೂರಕ್ಕೂ ಹೆಚ್ಚಿನ ಹವ್ಯಕ ಬಂಧುಗಳು ಭಾಗವಹಿಸಿದ್ದ ಈ ಸಮ್ಮೇಳನವು, ಹವ್ಯಕ ಸಮುದಾಯದ ಕಲೆ, ಸಂಸ್ಕೃತಿಯ ಸೊಗಡನ್ನು ಎರಡು ದಿನಗಳ ಕಾಲ ಪಸರಿಸುವಲ್ಲಿ ಯಶಸ್ವಿಯಾಯಿತು. ಉತ್ಸಾಹೀ ಸ್ವಯಂಸೇವಕರು ತಮ್ಮ ಹಲವಾರು ದಿನಗಳ ಶ್ರಮ, ನಿಸ್ವಾರ್ಥ ದುಡಿಮೆಯ ಮೂಲಕ ಸಮ್ಮೇಳನವು ವಿಜೃಂಭಣೆಯಿಂದ ನಡೆಯಲು ಕಾರಣರಾದರು.

ಜುಲೈ 5, 6, 2019 ರಲ್ಲಿ, ಮುಂದಿನ ಸಮ್ಮೇಳನವು,  ಕೆನಡಾದ ಟೊರಾಂಟೊದಲ್ಲಿ ನಡೆಯಲಿರುವುದರಿಂದ, ಆ ಸಮ್ಮೇಳನದ ಹೊಣೆಯನ್ನು ಹೊತ್ತಿರುವ ಶ್ರೀ ಪರಮೇಶ್ವರ ಭಟ್ ಅವರು ತಮ್ಮ ಸಮಿತಿಯ ಸದಸ್ಯರೊಂದಿಗೆ ಎಲ್ಲರನ್ನು ತಮ್ಮೂರಿಗೆ ಆಹ್ವಾನಿದರು.  ಅಧ್ಯಕ್ಷರ ವಂದನಾರ್ಪಣೆಯೊಂದಿಗೆ ಹದಿನೇಳನೆಯ ಸಮ್ಮೇಳನ ಮುಕ್ತಾಯವಾಯಿತು. ಮುಂದಿನ ಸಮ್ಮೇಳನದವರೆಗೆ ಮೆಲುಕು ಹಾಕಲು ಈ ಸಮ್ಮೇಳನದ ಸವಿನೆನಪುಗಳು ಭಾಗವಹಿಸಿದ ಎಲ್ಲರ ಮನಸ್ಸಿನಲ್ಲಿಯೂ ನೆಲೆಸಿರುತ್ತವೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಒಂದು ಸುಂದರ, ಸುಸಜ್ಜಿತ ಸಮ್ಮೇಳನದಲ್ಲಿ ಭಾಗವಹಿಸಿ,  ಆನಂದಿಸಲು  ಅವಕಾಶ ಕಲ್ಪಿಸಿಕೊಟ್ಟ  ಅನಿಲ್ ಅಡ್ಕೋಳಿ, ಸುಜಾತ ಅಡ್ಕೋಳಿ,  ರಾಜಾಶಂಕರ್ ಮತ್ತು ಸುಮಾ ರಾಜಾಶಂಕರ್ ದಂಪತಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.