About Havyaka Language

The Havyakas are united by their unique language. They speak  dialect of Kannada known as Havyaka Kannada. It is 60-70% similar to mainstream Kannada but draws more words from ancient Kannada. However, most mainstream Kannada speakers find it difficult to understand Havyaka Kannada. The Havyaka dialect is supposed to be quite old. Its origins, like many other things in India, are shrouded in mystery. Notably certain  Havigannada  speakers, more so in Uttara Kannada and Sagara region, uses neutral gender in place of feminine gender while addressing females. But Havyaks in certain part of Karnataka, like Kundapur, Thirthahalli, Kodagu do not speak Havigannada.

ಹವ್ಯಕರು – ಅವರ ಭಾಷೆ ಮತ್ತು ಸಾಹಿತ್ಯ – ಒಂದು ಕಿರುಪರಿಚಯ

ಹವ್ಯಕೇತರ ಓದುಗರಿಗೆ ಹವ್ಯಕರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಕುತೂಹಲವಿದ್ದರೆ, ಅದನ್ನು ಪೂರೈಸಲು ಈಬರಹವನ್ನು ತಯಾರಿಸಲಾಗಿದೆ.

ಹವ್ಯಕರು ಸ್ಮಾರ್ತ ಬ್ರಾಹ್ಮಣರು.  ದಕ್ಷಿಣದ ಪಂಚ ದ್ರಾವಿಡ ಬ್ರಾಹ್ಮಣ ಪಂಗಡಕ್ಕೆ ಸೇರಿದವರು. ಅವರು ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿದ್ದ, ಈಗಲೂ ವಾಸವಾಗಿರುವ ಪ್ರದೇಶಗಳು ಎಂದರೆ : ಉತ್ತರ ಕನ್ನಡ ಜಿಲ್ಲೆಯ, ಘಟ್ಟದ ಮೇಲಿನ (ಮಲೆನಾಡಿನ) ಶಿರಸಿ, ಸಿದ್ದಾಪುರ, ಯಲ್ಲಾಪುರ- ತಾಲೂಕುಗಳು ಮತ್ತು ಸಮುದ್ರ ತೀರದ ಕುಮಟಾ, ಹೊನ್ನಾವರ ತಾಲೂಕುಗಳು, ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ. ಹೊಸನಗರ, ತೀರ್ಥಳ್ಳಿ ತಾಲೂಕುಗಳು; ಅವಿಭಾಜಿತ ಮಂಗಳೂರು (ದಕ್ಷಿಣಕನ್ನಡ) ಜಿಲ್ಲೆಯ ಪುತ್ತೂರು, ಸುಳ್ಯ, ಬಂಟ್ವಾಳ, ಕಾಸರಗೋಡು (ಈಗಿನ ಕೇರಳದ ಜಿಲ್ಲೆ), ಮತ್ತು ಬೆಳ್ತಂಗಡಿ ತಾಲೂಕುಗಳು, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ಗ್ರಾಮಗಳು. ಸುಮಾರು ಏಳೆಂಟು ದಶಕಗಳ ಹಿಂದೆ, ಶೇಕಡಾ ೮೦-೯೦ ರಷ್ಟು ಹವ್ಯಕರು ಹಳ್ಳಿಗಳಲ್ಲಿ, ಸಣ್ಣ ಪೇಟೆಗಳಲ್ಲಿ (ಬಿಳಗಿ, ಬನಸಾಸಿ, ಕರ್ಕಿ, ಮೂರೂರು ಇತ್ಯಾದಿ) ವಾಸಿಸುತ್ತಿದ್ದರು. ಉಳಿದವರು,  ತಾಲೂಕು, ಜಿಲ್ಲಾ  ಕೇಂದ್ರಗಳಾದ ನಗರಗಳಲ್ಲಿ ವಾಸಿಸುತ್ತಿದ್ದರು. ಈಗ ಶೇಕಡಾ ೫೦ ರಷ್ಟು ಅಥವಾ ಅದಕ್ಕೂ ಕಡಿಮೆ ಸಂಖ್ಯೆಯಲ್ಲಿ ಹಳ್ಳಿಗಳಲ್ಲಿ  ಮತ್ತು ಅರ್ಧಕ್ಕೂ ಹೆಚ್ಚು (ಶೇಕಡಾ ೬೦ ರಷ್ಟೂ ಇರಬಹುದು) ಜನ ನಗರಗಳಲ್ಲಿ, ಮಹಾನಗರಗಳಲ್ಲಿ ವಾಸವಾಗಿದ್ದಾರೆ. ಹವ್ಯಕರ ಜನಸಂಖ್ಯೆ ೧೯೯೦ ರಲ್ಲಿ ಆರರಿಂದ ಎಂಟು ಲಕ್ಷ ಎಂದು ಒಂದು ಅಂದಾಜು. (ತಿಮ್ಮಪ್ಪ) ಇನ್ನೊಂದು ಅಂದಾಜಿನ ಪ್ರಕಾರ ೨೦೦೪ ರಲ್ಲಿ ಹವ್ಯಕರ ಜನಸಂಖ್ಯೆ ಐದು ಲಕ್ಷ ಮೀರಿಲ್ಲ ಎಂದು (ಶಾನಭಾಗ). ಈ ಅಂದಾಜುಗಳ ಮಾಹಿತಿ ಆಧಾರ ಗೊತ್ತಿಲ್ಲ. ನಂತರದ ಅವಧಿಯಲ್ಲಿ ಆದ ಜನಸಂಖ್ಯೆಯ ವೃದ್ದಿಯನ್ನು ಲೆಕ್ಕಹಾಕಿ, ಈ ಎರಡೂ ಅಂದಾಜಿನ ಸರಾಸರಿ ಹಿಡಿದರೆ, ಈಗ(೨೦೧೦) ಹವ್ಯಕರ ಸಂಖ್ಯೆ ಐದು ಲಕ್ಷದ ಮೇಲೆ, ಆರು ಲಕ್ಷಕ್ಕಿಂತ ಕಡಿಮೆ ಎನ್ನಬಹುದು. ಇದು ಇತ್ತೀಚಿನ ರಾಜ್ಯದ ಜನಸಂಖ್ಯೆಯ ಅಂದಾಜಿನ ಶೇಕಡ ಒಂದಕ್ಕಿಂತ ತುಸು ಕಡಿಮೆ ಆಗುತ್ತದೆ.

ಆರೇಳು ದಶಕಗಳ ಹಿಂದೆ ಹವ್ಯಕರಲ್ಲಿ ಗಂಡಸರು ಶಾಲೆಗಳಲ್ಲಿ ಕನ್ನಡ ಪ್ರಾಥಮಿಕ ಶಿಕ್ಷಣ ಇಲ್ಲವೇ ಮನೆಯಲ್ಲಿಯೇ ಅಕ್ಷರಾಭ್ಯಾಸವಾದವರಾಗಿರುತ್ತಿದ್ದರು. ಹೆಂಗಸರು ಹೆಚ್ಚಾಗಿ ನಿರಕ್ಷರಿಗಳು;  ಬಹು ಕಡಿಮೆ ಸಂಖ್ಯೆಯಲ್ಲಿ ಅಕ್ಷರಾಭ್ಯಾಸ ಆದವರಿದ್ದರು. ಈ ಪರಿಸ್ಥಿತಿ ಈಗ ಗಣನೀಯವಾಗಿ ಬದಲಾಗಿದೆ. ಹವ್ಯಕರಲ್ಲಿ ಈಗ ಸಾಕ್ಷರತೆಯ ಪ್ರಮಾಣ ಶೇಕಡ ೭೦ ರಷ್ಟು ಅಥವಾ ಅದಕ್ಕೂ ಹೆಚ್ಚು ಇರಬಹುದು. ಪುರುಷರೂ, ಮಹಿಳೆಯರೂ ವಿದ್ಯಾಭ್ಯಾಸ ಮಾಡಿ, ಉಚ್ಚ ಶಿಕ್ಷಣ, ವೃತ್ತಿ ಶಿಕ್ಷಣ ಪಡೆದು ಉದ್ಯೋಗಿಗಳಾಗಿ, ವೃತ್ತಿ ಜೀವನ ನಡೆಸುವವರಾಗಿ ನಗರ, ಪೇಟೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಭಾರತದ ಎಲ್ಲ ದೊಡ್ಡ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ವಾಸವಾಗಿದ್ದಾರೆ. (ಈ ಲೇಖಕ ವಿದೇಶದಲ್ಲಿ ಶಿಕ್ಷಣ ಪಡೆದ ಹವ್ಯಕರಲ್ಲಿ ಬಹುಶಃ ಎರಡನೇ ಇಲ್ಲವೇ ಮೂರನೇಯವನಾಗಿದ್ದಾನೆ.)

ಹವ್ಯಕರ ಮೂಲದ ಬಗ್ಗೆ ವಿಶೇಷ ಅಧ್ಯಯನ ಮಾಡಿದ ಕಲಸಿ ತಿಮ್ಮಪ್ಪ ಹಲವಾರು ಗ್ರಾಂಥಿಕ, ಶಿಲಾ ಶಾಸನ ದಾಖಲೆಗಳನ್ನು ಅಭ್ಯಸಿಸಿ, ಹವ್ಯಕರು ಸುಮಾರು ಕ್ರಿ.ಶ. ನಾಲ್ಕನೇ ಶತಮಾನದಲ್ಲಿ, ಬನವಾಸಿಯಲ್ಲಿ ಕದಂಬರಾಜ್ಯ ಸ್ಥಾಪಕ ಮಯೂರವರ್ಮನಿಂದ , ಉತ್ತರದ ಅಹಿಚ್ಛತ್ರದಿಂದ(ಈಗಿನ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿರುವ) ಕರೆಸಿಕೊಂಡು ಬಂದವರಾಗಿ, ಗ್ರಾಮಗಳನ್ನು ದಾನವಾಗಿ ಪಡೆದು, ದಕ್ಷಿಣದಲ್ಲಿ ನೆಲೆಸಿದರು ಎಂದು ಖಚಿತಪದಿಸಿದ್ದಾರೆ. ನಂತರ ಕದಂಬಶದವ  ರಾಜ ಲೋಕಾಹಿತನಿಂದ ಹವ್ಯಕ ಬ್ರಾಹ್ಮಣರೆಂದು ಹೆಸರು ಪಡೆದುಕೊಂಡರು ಎಂದೂ ಬರೆದಿದ್ದಾರೆ (ತಿಮ್ಮಪ್ಪ ೧೯೯೦). ಈ ರೀತಿ ಹವ್ಯಕರು ಅಹಿಚ್ಛತ್ರದಿಂದ ಬಂದವರು ಎಂಬ ಅಭಿಪ್ರಾಯ, ನಂಬಿಕೆ, ಅಧ್ಯಯನಶೀಲ, ಚಿಕಿತ್ಸಕ ಮನೋವೃತ್ತಿಯ ಹವ್ಯಕರಲ್ಲಿ ಹರಡಿಕೊಂಡಿದ್ದು, ಅದು ಈಗ ಅವರ ಮೌಖಿಕ ಇತಿಹಾಸ (Oral history)ವಾಗಿ ನೆಲೆಯೂರಿದೆ.

ಹವ್ಯಕರು ಮೂಲತಃ ಉತ್ತರದ ಅಹಿಚ್ಛತ್ರವಾಸಿಗಳಾದ ಸ್ಮಾರ್ತ ಬ್ರಾಹ್ಮಣರೇ. ಇಲ್ಲವೆ ದಕ್ಷಿಣದ ಪಂಚ ದ್ರಾವಿಡ ಬ್ರಾಹ್ಮಣರಾಗಿದ್ದೂ, ಜೈನಧರ್ಮ ಕರ್ನಾಟಕದಲ್ಲಿ ವ್ಯಾಪಕವಾಗಿ ಹರಡತೊಡಗಿದಾಗ, ಅಹಿಚ್ಛತ್ರಕ್ಕೆ ಹೋಗಿ ನೆಲೆಸಿದವರು, ಮಯೂರವರ್ಮನ ಆಮಂತ್ರಣದಿಂದ ಮತ್ತೆ ಕರ್ನಾಟಕಕ್ಕೆ-ದಕ್ಷಿಣಕ್ಕೆ ವಾಪಸ್ಸಾದರು ಎಂದು ಇನ್ನೊಂದು ಊಹೆ. ಎರಡನೇ ಊಹೆ ಸರಿಯಾದದ್ದು ಎಂದು ವಿದ್ವಾನ್ ತಿಮ್ಮಪ್ಪ ಮತ್ತು ವಿದ್ವಾನ್ ಏನ್.ರ್ಂಗನಾಥಶರ್ಮ ಇವರ ಅಭಿಪ್ರಾಯ.

ಪರಂಪರೆಯಿಂದ, ಮೂಲವೃತ್ತಿಯಿಂದ ಬ್ರಾಹ್ಮಣರಾಗಿದ್ದ-ಹವ್ಯಕವ್ಯಗಳಲ್ಲಿ ತೊಡಗಿರುತ್ತಿದ್ದ ಹವ್ಯಕರು ಕರಿಮೆಣಸು, ಕೃಷಿ, ತೋಟಗಾರಿಕೆ ವ್ಯವಸಾಯದಲ್ಲಿ ತೊಡಗಿಸಿಕೊಂಡರು. ಅಡಿಕೆ, ಯಾಲಕ್ಕಿ, ಮೆಣಸು ಮತ್ತು ಬಾಳೆಯ ತೋಟಗಾರಿಕೆ ಮತ್ತು ಕಬ್ಬು-ಭತ್ತದ ಕೃಷಿ ಇವರ ಪರಂಪರಾಗತ ವ್ಯವಸಾಯವಾಯಿತು. ಇವರು ವಾಸಿಸುತ್ತಿರುವ ಪ್ರದೇಶ, ಉತ್ತರಕನ್ನಡ ಜಿಲ್ಲೆಯ ಸಮುದ್ರ ತೀರದ ಕುಮಟಾ, ಹೊನ್ನಾವರ ತಾಲೂಕುಗಳನ್ನು ಹೊರತುಪಡಿಸಿದರೆ , ಗುಡ್ಡ-ಕಂದರಗಳ, ದಟ್ಟಾರಣ್ಯಗಳ, ಭಾರೀ ಮಳೆ ಬೀಳುವ, ಭೌಗೋಳಿಕವಾಗಿ ಹತ್ತಿರವಾಗಿರುವ (ಅವಿಭಾಜಿತ ಮಂಗಳೂರು ಜಿಲ್ಲೆಯಲ್ಲಿ ಸ್ವಲ್ಪ ಪ್ರದೇಶ ದೂರವಾಗಿದೆ) ಮಲೆನಾಡು ಪ್ರದೇಶ.

ಹವ್ಯಕರ ಭಾಷೆ

ಹವ್ಯಕರ ಆಡು ಮಾತು ಕನ್ನಡ. ಆದರೆ ಒಂದು ವಿಶಿಷ್ಟ ಬಗೆಯದು. ಹಲವು ಹಳಗನ್ನಡ ಶಬ್ದಗಳು ಬಳಕೆಯಲ್ಲಿದ್ದು, ತಮಿಳಿಗೆ ಸಾಮ್ಯವಿರುವ ಶಬ್ದಗಳನೇಕ ಇವೆ. ಸ್ವರ, ವ್ಯಂಜನ ಪ್ರಯೋಗ, ನಾಮಪದ ಕ್ರಿಯಾಪದಗಳ ಬಳಕೆ, ಇವುಗಳನ್ನು ತಮ್ಮ ಆಡುಮಾತಿನಲ್ಲಿ ವಿಶಿಷ್ಟ ರೀತಿಯಲ್ಲಿ ಬಳಸಿಕೊಂಡು ವಾಕ್ಯರಚನೆ ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹವ್ಯಕರ ಭಾಷೆಯಲ್ಲಿ ಕೆಲವು ಕೊಂಕಣಿ, ಉರ್ದು ಹಾಗೂ ಮರಾಠಿ ಶಬ್ದಗಳು ಕಲಬೆರಕೆ ಆಗಿವೆ. ಹವ್ಯಕರನ್ನು ಹಿಂದೆ ಹೈಗ, ಹೈದ, ಹವೀಕ ಎಂದು ಗುರುತಿಸಲಾಗುತ್ತಿತ್ತು. ಹೈಗ, ಹೈದ ಈಗ ಬಳಕೆಯಲ್ಲಿಲ್ಲ. ಹಿಂದೆ ಹವ್ಯಕರು ‘ತಿಕಳಾರಿ’ ಲಿಪಿಯಲ್ಲಿ ಬರೆಯುತ್ತಿದ್ದರು. ಇದು ಮಹಾರಾಷ್ಟ್ರದಲ್ಲಿ ಬಳಕೆಯಲ್ಲಿದ್ದ ‘ಮೋಡಿ’ ರೀತಿಯದ್ದು ಈಗ ಕಣ್ಕಾಣದ ರೀತಿಯಲ್ಲಿ ನಶಿಸಿ ಹೋಗಿದೆ. ಹವ್ಯಕರಲ್ಲಿ ತಾಳಮದ್ದಲೆ ಯಕ್ಷಗಾನ, ನೃತ್ಯನಾಟಕ ವ್ಯಾಪಕವಾಗಿ ಹರಡಿದೆ. ಕತೆ, ಹಾಡುಗಳು ಮೌಖಿಕ ಪರಂಪರೆಯಲ್ಲಿ ಅಸ್ತಿತ್ವದಲ್ಲಿದ್ದವು. ಅವುಗಳನ್ನು ಸಂಗ್ರಹಿಸಿ, ಪರಿಕ್ಷರಿಸಿ ಹಲವು ಪುಸ್ತಕಗಳು ಪ್ರಕಟವಾಗಿವೆ. ಟಿ.ಕೇಶವ ಭಟ್ಟರು ಸಂಗ್ರಹಿಸಿ, ಆಯ್ಕೆ ಮಾಡಿ ಪ್ರಕಟಿಸಿದ, ‘ಹವ್ಯಕರ ಶೋಭಾನೆಗಳು’, ಒಂದು ಮಹತ್ಸಾಧನೆ, ಸಾಂಸ್ಕೃತಿಕ ದಾಖಲೆ (೧೯೮೬)  ಇವೆಲ್ಲ ಹವ್ಯಕರ ಜಾನಪದ ಸಾಹಿತ್ಯ ಎನ್ನಬಹುದು.

ಹವ್ಯಕರ ಸಾಹಿತ್ಯ
ಕನ್ನಡದಲ್ಲಿ ಹವ್ಯಕರು ರಚಿಸಿದ ಮೊದಲ ಕೃತಿ, ‘ವರದವಿಠ್ಠಲರಾಮಾಯಣ’ ಕ್ರಿ.ಶ. ೧೭೫೧ರಲ್ಲಿ ಎಂದು ಇತ್ತೀಚಿಗೆ ತಿಳಿದು ಬನ್ದಿದೆ. ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ರಚಿಸಿದ ‘ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ’ ಹವ್ಯಕ ಭಾಷೆಯಲ್ಲಿದ್ದು, ೧೮೮೭ರಲ್ಲಿ ಮುಂಬಯಿಯಲ್ಲಿ ಪ್ರಕಟವಾಯಿತು. ಇದಕ್ಕೆ ಕನ್ನಡದ ಪ್ರಪ್ರಥಮ ಸಾಮಾಜಿಕ ನಾಟಕ ಎಂಬ ಕೀರ್ತಿಯಿದೆ! ಕಳೆದ ೨೬೦ ವರ್ಷಗಳಲ್ಲಿ ಹವ್ಯಕರ ಸಾಹಿತ್ಯ ರಚನೆ, ವಿವಿಧ ಪ್ರಾಕಾರಗಳಲ್ಲಿ ನಡೆದು ಬಂದಿದೆ. ಈ ಅವಧಿಯಲ್ಲಿ ೮೫೦ ಹವ್ಯಕರಿಂದ ಸುಮಾರು ೬೦೦೦(ಆರು ಸಾವಿರ)ದಷ್ಟು ಗ್ರಂಥಗಳು ವಿವಿಧ ಭಾಷೆಗಳಲ್ಲಿ ರಚನೆಯಾದ ಮಾಹಿತಿ ಇದೆ.

ಹವ್ಯಕ ಮಹಿಳೆಯರೂ ಸಾಹಿತ್ಯ ಸೃಷ್ಟಿಯಲ್ಲಿ ಸಾಕಷ್ಟು ಕಾರ್ಯಮಾಡಿದ್ದಾರೆ. ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಕತೆ, ಕಾದಂಬರಿ, ನಾಟಕ, ಕವನ, ಹಾಸ್ಯಲೇಖನ, ಇತ್ಯಾದಿ. ಪ್ರಥಮ ಮಹಿಳಾಕೃತಿ  ‘ವೇದಾಂತ ತತ್ವಸಾರ’ ೧೮೮೬ರಲ್ಲಿ ಮುಂಬಯಿಯಲ್ಲಿ ಪ್ರಕಟವಾಯಿತು. ಇದನ್ನು ಬರೆದವರು ಶಿವಮೊಗ್ಗ ಜಿಲ್ಲೆಯ ಸಾಗರ ಪ್ರಾಂತದ ಕಿಬ್ಬಚ್ಚಲು ಮಂಜಮ್ಮ.  ಇತ್ತೀಚೆಯ ಸಮೀಕ್ಷೆಯೊಂದರ ಪ್ರಕಾರ, ಅಲ್ಲಿಂದ ಇಲ್ಲಿಯ ತನಕ ಸುಮಾರು ೧೫೦ ಮಹಿಳೆಯರಿಂದ ೪೦೦ ರಷ್ಟು ಕೃತಿಗಳು ರಚನೆಯಾಗಿವೆ. (ಶಾನಭಾಗ ೨೦೦೨)ಹವ್ಯಕ ಸಾಹಿತಿಗಳಲ್ಲಿ ಕವಿ ವಿ.ಜಿ.ಭಟ್ಟರಿಗೆ ಹಾಗೂ ಕಾದಂಬರಿಕಾರ್ತಿ ಎ.ಪಿ.ಮಾಲತಿಯವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರಕಿದೆ. ಇನ್ನೂ ಕೆಲವರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಹಾಗೂ ಇತರ ಪ್ರತಿಷ್ಠಾನಗಳಿಂದ, ಬೇರೆ ಬೇರೆ ನಮೂನೆಯ ಕೃತಿಗಳಿಗೆ ಪುರಸ್ಕಾರ, ಪ್ರಶಸ್ತಿ ದೊರೆಕಿವೆ.

ಹವ್ಯಕ ಸಾಹಿತ್ಯ – ‘ಹವಿಗನ್ನಡ ಸಾಹಿತ್ಯ’
ಹವ್ಯಕರು ಸಾಹಿತ್ಯ ರಚನೆಯಲ್ಲಿ ಬಹುಕಾಲದಿಂದ ಗ್ರಾಂಥಿಕ, ಸಾಹಿತ್ಯಿಕ ಕನ್ನಡವನ್ನು ಬಳಸಿದ್ದಾರೆ. ಇತ್ತೀಚಿನ ದಶಕಗಳಲ್ಲಿ ಹವ್ಯಕ ಸಾಹಿತಿಗಳು ತಮ್ಮ ಆಡುಮಾತಿನಲ್ಲಿ ಸಾಹಿತ್ಯ ಸೃಷ್ಟಿ ಮಾಡುವ ಪ್ರಯತ್ನ ಪ್ರಾರಂಭಿಸಿದ್ದಾರೆ. ಹವ್ಯಕ ಭಾಷೆಯಲ್ಲಿ ಕಥೆ, ಕವನ, ನಾಟಕ, ಕಾವ್ಯ, ಖಂಡಕಾವ್ಯ, ಕಾದಂಬರಿಗಳು ರಚನೆಯಾಗಿವೆ. ಕೆಲವರು ಕಥೆ, ಕಾದಂಬರಿಗಳಲ್ಲಿ ಸಾಂದರ್ಭಿಕವಾಗಿ ಸಂಭಾಷಣೆಯನ್ನು ಹವ್ಯಕರ ಆಡು ಮಾತಿನಲ್ಲಿ ಬರೆದಿದ್ದಾರೆ. ಈ ಎಲ್ಲ ಕೃತಿಗಳನ್ನು ‘ಹವಿಗನ್ನಡ ಸಾಹಿತ್ಯ’ ಎಂದು ಕರೆಯಲಾಗುತ್ತದೆ. ಹೈಗನ್ನಡ, ಹೈಗರ ಭಾಷೆ, ಹವೀಕರ ಕನ್ನಡ ಎಂದು ಹಿಂದೆ ಬಳಸಲಾದ ಶಬ್ದಗಳ ಬದಲು ‘ಹವಿಗನ್ನಡ’ ಶಬ್ದವನ್ನು ವ್ಯಾಪಕವಾಗಿ ಬಳಕೆಮಾಡುವ, ಪ್ರಚಾರಿಸುವ ಪ್ರಯತ್ನ ೧೯೯೨ರಿಂದ, (ವೆ೦ಕಟೇಶ ದೊಡ್ಮನೆ, ತಲಕಾಲಕೊಪ್ಪ, ಅವರ ಕವನದಲ್ಲಿ ಮೊದಲು ಈ ಶಬ್ದದ ಬಳಕೆ ಆಯಿತು) ನಡೆದಿದೆ. ಈ ‘ಹವಿಗನ್ನಡ ಸಾಹಿತ್ಯದ’ ಸಮಗ್ರ ಸಮೀಕ್ಷೆಯನ್ನು ಹರಿಕೃಷ್ಣ ಭರಣ್ಯರಿಂದ ಅಖಿಲ ಹವ್ಯಕ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಮಾಡಿಸಿ ‘ಈ ನೆಲದಕಂಪು’ ಎಂಬ ಹೆಸರಿನಲ್ಲಿ ಪುಸ್ತಕ ಪ್ರಕಟವಾಗಿದೆ (೨೦೦೫). ಈ ಸಮೀಕ್ಷೆಯ ಕೊನೆಯಲ್ಲಿ ಹರಿಕೃಷ್ಣ ಭರಣ್ಯರು ಹೀಗೆ ಹೇಳಿದ್ದಾರೆ : ‘ಹಾಗೆ ನೋಡಿದಾಗ, ಹವ್ಯಕರು ರಚಿಸಿದ ಇತರ ಸಾಹಿತ್ಯಕೃತಿಗಳಲ್ಲಿ ಅವರದೇ ಸಂಸ್ಕೃತಿಯು ಎಷ್ಟರ ಮಟ್ಟಿಗೆ ಚಿತ್ರಿತವಾಗಿದೆ? ಎಲ್ಲೆಲ್ಲಿ ಅವರ ಆಚಾರ, ವಿಚಾರ, ನಂಬಿಕೆ, ಗಾದೆ, ಪಡೆನುಡಿಗಳು, ಜನಪದ ಸಂಸ್ಕೃತಿಗಳು ಪೂರ್ತಿಯಾಗಿ ಚಿತ್ರಿತಗೊಂಡಿವೆ? ಎಂದಾಗ ಕಾಣಿಸುವುದು, ಎಲ್ಲೋ ಪ್ರಾಸಂಗಿಕವಾಗಿ ಬಂದದ್ದಷ್ಟೆ…’

‘ಆದರೆ, ಈಚೆಗೆ ಬರುತ್ತಿರುವ ಹವಿಗನ್ನಡ ರಚನೆಗಳನ್ನು ಸ್ವಲ್ಪ ಆಳವಾಗಿ ಅಧ್ಯಯನ ನಡೆಸಿದರೆ, ಅಲ್ಲಿ ಹೆಚ್ಚಾಗಿ ಬರಹಗಾರ ತನಗೆ ಅನ್ನಿಸಿದ್ದನ್ನೆಲ್ಲ ಆಪ್ತವಾದ ಭಾಷೆಯಲ್ಲಿ ಬರೆಯುತ್ತ, ಸಹಜತೆಯನ್ನು, ಜೀವಂತಿಕೆಯನ್ನು ತರುವುದರಲ್ಲಿ ಸಫಲವಾಗಿದ್ದಾನೆಂಬುದು ಸ್ಪಷ್ಟವಾಗಿದೆ.. ‘. ಹವ್ಯಕ ಬದುಕಿನ ವಿವಧ ಎಳೆಗಳನ್ನು, ಆಗುಹೋಗುಗಳನ್ನು ಸಮಗ್ರವಾಗಿ ಚಿತ್ರಿಸುವ ಕೃತಿಗಳು ಇನ್ನೂ ಬಂದಿಲ್ಲ’. ಕಾದಂಬರಿ ‘ತಲೆಗಳಿ’ ಈ ದಿಕ್ಕಿನಲ್ಲಿ ನಡೆಸಿದ ಮೊದಲ ಪ್ರಯತ್ನವೆಂದು ನನ್ನ ಅನಿಸಿಕೆ.

ಬರಹಗಾರ:  ಶಂಕರ ಪಾಠಕ  | ಬೆಂಗಳೂರು |  ೧೪-೧೧-೨೦೧೦

ಆಕರ ಗ್ರಂಥಗಳು
೧) ಎಚ್.ಎಂ.ತಿಮ್ಮಪ್ಪ, ಹವ್ಯಕರ ಇತಿಹಾಸ, ೧೯೯೦
೨) ನಾರಾಯಣ ಶಾನಭಾಗ, ಹವ್ಯಕ ಮಹಿಳಾ ಸಾಹಿತ್ಯ ದರ್ಶಿನಿ, ೨೦೦೭
೩) ಹರಿಕೃಷ್ಣ ಭರಣ್ಯ, ಈ ನೆಲದ ಕಂಪು, ೨೦೦೫.